Tuesday, June 25, 2013
ಹಾರುವ ಬಿಳಿ ಕುದುರೆ
ಅವನ ದೇಹ ಇನ್ನೇನು ನೇಣಿನ ಹಗ್ಗಕ್ಕೆ ಕೊರಳೊಡ್ಡುವುದಿತ್ತು. ರಾಜನ ಆಜ್ಞೆ! ಅವನ ದೇಹಾಂತ್ಯವಾಗುವ ಮುನ್ನ ರಾಜನೊಡನೆ ಮಾತನಾಡಬೇಕೆಂದ. ಭಟರು ಒಪ್ಪಿದರು. ರಾಜನ ಬಳಿ ಬಂದ ಕೂಡಲೇ ಆತ ರಾಜನನ್ನು ಹೊಗಳತೊಡಗಿದ. ‘ರಾಜನೇ ನೀನೊಬ್ಬ ಮಹಾನ್ ಬುದ್ಧಿವಂತ. ನಿನ್ನ ತೀರ್ಮಾನಗಳಲ್ಲಿ ತಪ್ಪೇ ಇಲ್ಲ. ನೀನು ಗುರು ಹಿರಿಯರಿಗೆ ಮನ್ನಣೆ ನೀಡುತ್ತೀಯ, ನಿನ್ನಂಥ ಆಡಳಿತಗಾರರು ಈ ಭೂಮಂಡಲದಲ್ಲೇ ಇಲ್ಲ...’ ಎಂದೆಲ್ಲಾ ಹೊಗಳತೊಡಗಿದ. ರಾಜನೇ ಆದರೆ ನಿನಗೆ ಗೊತ್ತಿಲ್ಲದ ವಿಷಯವೊಂದಿದೆ. ಬಿಳಿ ಕುದುರೆ ಹಾರುವುದು ನೋಡಿರುವೆಯಾ? ಬಿಳಿ ಕುದುರೆ ಹಾರುವಂತೆ ಮಾಡುವ ಸಾವiಥ್ರ್ಯ ನನಗೊಬ್ಬನಿಗೆ ಮಾತ್ರ ನನ್ನ ಅಜ್ಜ ಹೇಳಿಕೊಟ್ಟಿದ್ದಾನೆ. ಇಡೀ ರಾಜ್ಯದಲ್ಲಿ ಈ ಕಲೆಯನ್ನು ಅರಿತವರಾರೂ ಇಲ್ಲ. ಹೀಗೆಂದ ಕೂಡಲೇ ರಾಜನ ಕುತೂಹಲ ಕೆರಳಿತು. ಕೂಡಲೇ ಬಿಳಿ ಕುದುರೆಯೊಂದನ್ನು ಅಲ್ಲಿಗೆ ತರಿಸಿದ.
`ಹುಂ ಇದನ್ನು ಹಾರುವಂತೆ ಮಾಡು’ ಎಂದು ಆಜ್ಞಾಪಿಸಿದ.
ಈ ಕುದುರೆ ಹಾರುವಂತೆ ತರಬೇತಿ ನೀಡಲು ಕನಿಷ್ಠ ಎರಡು ವರ್ಷ ಬೇಕು ಎಂದ ಅವರಾಧಿ. ‘ಆಗಲಿ. ಎರಡು ವರ್ಷಗಳ ನಂತರ ಕುದುರೆ ಹಾರದಿದ್ದರೆ ನಿನ್ನನ್ನು ಗಲ್ಲಿಗೇರಿಸುವೆ’ ಎಚ್ಚರಿಸಿದ ರಾಜ.
ಕುದುರೆಯೊಂದಿಗೆ ಅವನು ಮನೆಗೆ ಹಿಂದಿರುಗಿದ. ಮನೆಯವರೆಲ್ಲರೂ ಅಳುತ್ತಾ ಕುಳಿತಿದ್ದರು. ಕುದುರೆ ಹಾರುವುದಿಲ್ಲ. ಇವನು ಬದುಕೋಲ್ಲ ಎಂಬ ಭಾವದಲ್ಲಿ. ಸಾಲದ್ದಕ್ಕೆ ಅವನ ಪತ್ನಿ ‘ನಿಮಗೇನು ಹುಚ್ಚು ಹಿಡಿದಿದೆಯೇ? ಎಲ್ಲಾದರೂ ಕುದುರೆ ಹಾರಲು ಸಾಧ್ಯವೇ?’ ಎಂದು ಪ್ರಶ್ನಿಸಿ ದುಃಖಿಸಿದಳು. ಆಗ ಹೆಂಡತಿಗೆ ಹೇಳಿದ, ‘ಚಿಂತಿಸಬೇಡ. ಕುದುರೆ ಹಾರುವುದಿಲ್ಲ ನಿಜ. ಆದರೆ ಇಲ್ಲಿಯವರೆಗೂ ಯಾರೂ ಕುದುರೆಯನ್ನು ಹಾರುವಂತೆ ಮಾಡಲು ಯತ್ನಿಸಿಯೇ ಇಲ್ಲ. ರಾಜ ಈಗಾಗಲೇ ವೃದ್ಧನಾಗಿದ್ದಾನೆ. ಇನ್ನು ಎರಡು ವರ್ಷ ಆತ ಬದುಕುವುದೇ ಹೆಚ್ಚು. ಅಲ್ಲಿಗೂ ಅವನು ಬದುಕಿದ್ದರೆ ಕುದುರೆಯೇ ಸತ್ತು ಬೀಳಬಹುದು. ಆಗ ಇನ್ನೊಂದು ಕುದುರೆ ಪಡೆಯುತ್ತೇನೆ. ಇನ್ನೂ ಎರಡು ವರ್ಷ ನಾನು ನೆಮ್ಮದಿಯಾಗಿ ಜೀವಿಸಬಹುದು. ಈ ಮಧ್ಯೆ ಕ್ರಾಂತಿಯಾಗಿ ರಾಜನೇ ಪದಚ್ಯುತನಾಗಬಹುದು, ಅಥವಾ ಇದಾವುದೂ ಸಂಭವಿಸದಿದ್ದರೂ ನನಗೆ ಇನ್ನು ಎರಡು ವರ್ಷ ಅವಧಿ ಜೀವನ ಸಿಕ್ಕಿದೆ. ಅದು ನಿನಗೆ ಕಡಿಮೆ ಎನಿಸುತ್ತಿದೆಯೇ’ ಎಂದ. ಅವನ ತಿಳಿವಳಿಕೆಯನ್ನು ಅವರೆಲ್ಲರೂ ಮೆಚ್ಚಿ ತಲೆದೂಗಿದರು.
Subscribe to:
Posts (Atom)